ಎಚ್ಚೆತ್ತ ಸರ್ಕಾರ: ಕೊಡಗಿನಲ್ಲಿ 104 ಸಂಭವನೀಯ ಭೂಕುಸಿತ-ಪ್ರವಾಹ ಪ್ರದೇಶಗಳ ಗುರುತು; 2,995 ಕುಟುಂಬಗಳ ಸ್ಥಳಾಂತರಕ್ಕೆ ಸಿದ್ಧತೆ ಭಾರತೀಯ ಭೂಗರ್ಭ ಇಲಾಖೆ ಸಲ್ಲಿಸಿದ ವರದಿಯನ್ನು ಆಧರಿಸಿ ಈ ಪ್ರದೇಶಗಳನ್ನು ಗುರುತಿಸಲಾಗಿದ್ದು, ಈ ತಿಂಗಳು ಭಾರೀ ಮಳೆಯಾಗುವ ನಿರೀಕ್ಷೆ ಇರುವುದರಿಂದ ಜಿಲ್ಲಾಡಳಿತವು ಸಂಭಾವ್ಯ ಭೂಕುಸಿತದ ಪ್ರದೇಶಗಳಲ್ಲಿ ನೆಲೆಗೊಂಡಿರುವ 2,995 ಕುಟುಂಬಗಳಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳಲು ನೋಟಿಸ್ ನೀಡಿದೆ. ಮಡಿಕೇರಿ: ಕೇರಳ ರಾಜ್ಯದ ವಯನಾಡಿನಲ್ಲಿ ಸಂಭವಿಸಿದ ಜಲಸ್ಫೋಟ-ಗುಡ್ಡ ಕುಸಿತ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಕೊಡಗಿನಲ್ಲಿ 104 ಸಂಭವನೀಯ ಭೂಕುಸಿತ-ಪ್ರವಾಹ ಪ್ರದೇಶಗಳನ್ನು ಗುರುತು ಮಾಡಿದ್ದು, 2,995 ಕುಟುಂಬಗಳ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿದುಬಂದಿದೆ.ಭಾರತೀಯ ಭೂಗರ್ಭ ಇಲಾಖೆ ಸಲ್ಲಿಸಿದ ವರದಿಯನ್ನು ಆಧರಿಸಿ ಈ ಪ್ರದೇಶಗಳನ್ನು ಗುರುತಿಸಲಾಗಿದ್ದು, ಈ ತಿಂಗಳು ಭಾರೀ ಮಳೆಯಾಗುವ ನಿರೀಕ್ಷೆ ಇರುವುದರಿಂದ ಜಿಲ್ಲಾಡಳಿತವು ಸಂಭಾವ್ಯ ಭೂಕುಸಿತದ ಪ್ರದೇಶಗಳಲ್ಲಿ ನೆಲೆಗೊಂಡಿರುವ 2,995 ಕುಟುಂಬಗಳಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳಲು ನೋಟಿಸ್ ನೀಡಿದೆ.ಈ ಹಿಂದಿನ ವಿಪತ್ತು ವರದಿಗಳು ಮತ್ತು ಸಮೀಕ್ಷೆಗಳ ಆಧಾರದ ಮೇಲೆ ಈ ಪ್ರದೇಶಗಳನ್ನು ಗುರುತಿಸಲಾಗಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಸ್ಥಳಾಂತರಿಸಬೇಕಾದ ಕುಟುಂಬಗಳನ್ನು ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಜಿಲ್ಲಾಡಳಿತ ಸದ್ಯ 14 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿದೆ. ಅಲ್ಲಿ 200 ಕ್ಕೂ ಹೆಚ್ಚು ನಿವಾಸಿಗಳು ಆಶ್ರಯ ಪಡೆದಿದ್ದಾರೆ. ಅಲ್ಲದೆ, ವಿಪತ್ತಿನ ಆತಂಕ ಎದುರಿಸುತ್ತಿರುವ ಪ್ರದೇಶಗಳಲ್ಲಿ 95 ಪರಿಹಾರ ಕೇಂದ್ರಗಳನ್ನು ತೆರೆಯಲು ಸ್ಥಳಗಳನ್ನು ಗುರುತಿಸಲಾಗಿದೆ.ಮಳೆಯ ಮುನ್ಸೂಚನೆಯನ್ನು ಆಧರಿಸಿ ಭೂಕುಸಿತ ಸಾಧ್ಯತೆ ಇರುವ ಪ್ರದೇಶಗಳಿಂದ ನಿವಾಸಿಗಳನ್ನು ಸ್ಥಳಾಂತರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಡಿಸಿ ವೆಂಕಟ್ ರಾಜಾ ತಿಳಿಸಿದ್ದಾರೆ.ಕೊಡಗು ಜಿಲ್ಲೆಯಲ್ಲಿ ಈ ವರ್ಷ ಶೇ 24ರಷ್ಟು ಅಧಿಕ ಮಳೆಯಾಗಿದ್ದು, ಈ ತಿಂಗಳು ಹೆಚ್ಚಿನ ಮಳೆಯಾಗುವ ನಿರೀಕ್ಷೆ ಇದೆ.